ಮಾನವ ಹಕ್ಕುಗಳು -
ಮಾನವನ ನೈಸರ್ಗಿಕ ಹಕ್ಕುಗಳ ಸಂಗ್ರಹರೂಪ (ಹ್ಯೂಮನ್ ರೈಟ್ಸ್). ನೈಸರ್ಗಿಕ ಹಕ್ಕುಗಳು ಸಂಪ್ರದಾಯ ಅಥವಾ ಆಚಾರಗಳಿಂದ ಬಂದವಲ್ಲ-ಪ್ರಕೃತಿದತ್ತವಾದವು. ವ್ಯಕ್ತಿಯ ಹಕ್ಕು ಇದು ಎಂದು ಸಾಧಿಸುವಲ್ಲಿ ಅಂತಿಮ ನಿರ್ಣಾಯಕ ಅಧಿಕಾರವಿರುವುದು ನಿಸರ್ಗ ಒಂದಕ್ಕೇ ಹೊರತು ಯಾವುದೇ ಸಿದ್ಧಾಂತಕ್ಕಲ್ಲ. ಪ್ರಭುಶಕ್ತಿಗೂ ಅಲ್ಲ. ಅಂದ ಮೇಲೆ ನೈಸರ್ಗಿಕ ಹಕ್ಕುಗಳು ಕಾನೂನು ಲಭ್ಯ ಹಕ್ಕುಗಳಿಗಿಂತ ಪೂರ್ತಿ ಭಿನ್ನವಾದವು ಎಂದಾಯಿತು. ಹಕ್ಕುಗಳು ಶಾಸನಸಭೆಯ ಸಮ್ಮತಿ ಪಡೆದವಾಗಿದ್ದು ಅವನ್ನು ನ್ಯಾಯಾಲಯಗಳಲ್ಲಿ ಜಾರಿಗೊಳಿಸಬಹುದು. ಹೀಗಲ್ಲದೇ ಸಂವಿಧಾನ ಲಭ್ಯ ಹಕ್ಕುಗಳು ಇವೆರಡೂ ಹಕ್ಕುಗಳಿಗಿಂತ ಬೇರೆಯವೇ. ಶಾಸನ ಸಭೆ ಕೂಡ ಇವುಗಳ ಪಾವಿತ್ರ್ಯವನ್ನು ಅತಿಕ್ರಮಿಸಲಾಗುವುದಿಲ್ಲ. ಕಾರ್ಯಾಂಗ ಮತ್ತು ಶಾಸಕಾಂಗ ಎರಡೂ ಇವುಗಳಿಗೆ ಬದ್ಧವಾಗಿರುತ್ತವೆ.

ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಾಙ್ಮಯ ರಾಜಕೀಯ-ಶಾಸನಲಭ್ಯ (ಪೊಲಿಟಿಕೊ-ಲೀಗಲ್) ಹಾಗೂ ಸಾಮಾಜಿಕಾರ್ಥಿಕ (ಸೋಶಿಯೊ-ಎಕನಾಮಿಕ್) ಹಕ್ಕುಗಳನ್ನು ಕುರಿತಂತೆ ವ್ಯಾಪಕ ಚರ್ಚೆಗಳಿಂದ ಕೂಡಿದೆ. ಪ್ರಜಾಪ್ರಭುತ್ವಾತ್ಮಕ ಸಮಾಜವೊಂದು ಪ್ರಜಾಪ್ರಭುತ್ವಾತ್ಮಕವಾಗಿಯೇ ಉಳಿದಿದ್ದು ತನ್ನ ಪ್ರಜೆಗಳಿಗೆ ರಾಜಕೀಯ ಹಕ್ಕುಗಳನ್ನು ಒದಗಿಸಬೇಕಾದರೆ ಕನಿಷ್ಠ ಆರ್ಥಿಕ ಆವಶ್ಯಕತೆಗಳ ಪೂರೈಕೆ ಅಗತ್ಯಪೂರ್ವ ಷರತ್ತು.

ಅನೇಕ ದೇಶಗಳಲ್ಲಿ ವರ್ಣ, ಧರ್ಮ ಅಥವಾ ಜಾತಿಭೇದಗಳ ಆಧಾರದ ಮೇಲೆ ಬಹುಸಂಖ್ಯಾತ ಜನರ ವಿರುದ್ಧ ಗಂಭೀರ ಸ್ವರೂಪದಲ್ಲಿ ಪಕ್ಷಪಾತ ಮಾಡಲಾಗುತ್ತಿದೆ. ಆದ್ದರಿಂದ ಆರ್ಥಿಕ ದಾರಿದ್ರ್ಯ ನಿವಾರಣೆಯಂತೆ ಸಾಮಾಜಿಕವಾದ ಹೀನ ಸ್ಥಿತಿಯ ನಿವಾರಣೆಯೂ ಅಷ್ಟೇ ಮುಖ್ಯವಾದುದು.

ಮಾನವ ಹಕ್ಕುಗಳಾವುವು? ಅವನ್ನು ಏಕೆ ಬಯಸುತ್ತೇವೆ? ಎಂದು ಯಾರಾದರೂ ಪ್ರಶ್ನಿಸಬಹುದು.

ರಾಜಕೀಯ ದೃಷ್ಟಿಕೋನದಿಂದ ಪರಿಶೀಲಿಸಬಹುದಾದ ಹಕ್ಕುಗಳು: ಸಮಾನತೆಯ ಹಕ್ಕುಗಳನ್ನು ಹೊಂದುವ ಬಯಕೆ, ವಿವಿಧ ಸ್ವಾತಂತ್ರ್ಯಗಳ ಹಕ್ಕು-ಉದಾಹರಣೆಗೆ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಮಾವೇಶಸ್ವಾತಂತ್ರ್ಯ, ಶೋಷಣಾತೀತ ಸ್ವಾತಂತ್ರ್ಯ, ಆಸ್ತಿಯ ಹಕ್ಕು, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕುಗಳು ಇತ್ಯಾದಿ. ಇವೆಲ್ಲಕ್ಕಿಂತ ಮಿಗಿಲಾಗಿ ಶಾಂತಿ ಹಾಗೂ ಪ್ರಗತಿ ಸಂಬಂಧ ಹಕ್ಕುಗಳು.

ಆರ್ಥಿಕ ದೃಷ್ಟಿಕೋನದಿಂದ ಪರಿಶೀಲಿಸಬಹುದಾದ ಹಕ್ಕುಗಳು: ಮಾನವನ ಘನತೆಗೆ ತಕ್ಕುದಾದ ಬಾಳುವೆ ನಡೆಸಲು ಸಾಧಕವಾದ ಹಕ್ಕುಗಳು-ಎಲ್ಲರ ಕ್ಷೇಮಾಭ್ಯುದಯ ಗುರಿ ಸಾಧಿಸುವಂಥದು, ಮೂಲಭೂತ ಆವಶ್ಯಕತೆಗಳನ್ನು ಪೂರೈಸುವಂಥದು, ಜೀವನಮಟ್ಟವನ್ನು ಎತ್ತಿ ಹಿಡಿಯುವಂಥದು. ನಿರುದ್ಯೋಗ, ರೋಗರುಜಿನಗಳು, ಅಂಗವಿಕಲತೆ, ವೃದ್ಧಾಪ್ಯ ಇವೇ ಮುಂತಾದವುಗಳ ವಿರುದ್ಧ ಭದ್ರತೆ ನೀಡುವಿಕೆ.

ಸಾಮಾಜಿಕ ದೃಷ್ಟಿಕೋನದಿಂದ ಪರಿಗಣಿಸಬಹುದಾದ ಹಕ್ಕುಗಳು: ವರ್ಣ, ಧರ್ಮ, ಜಾತಿ ಅಥವಾ ಜನಾಂಗಗಳ ಆಧಾರದ ಮೇಲೆ ಕಂಡುಬರುವ ಅಸಮಾನತೆಯ ನಿವಾರಣೆಯ ಬಯಕೆ.

ಈ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳ ಪರಿಣಾಮವಾಗಿ ರಾಷ್ಟ್ರಗಳ ಒಕ್ಕೂಟಕ್ಕಿಂತ ಬೇರೆಯಾದ ವಿಶ್ವಸಂಸ್ಥೆಯೊಂದರ ಅನಿವಾರ್ಯತೆಯನ್ನು ರಾಷ್ಟ್ರಗಳು ಮನಗಂಡವು. ಸರ್ಕಾರಗಳು ಪ್ರಜಾಸಮುದಾಯದ ಬಗೆಗೆ ನಡೆದುಕೊಳ್ಳಬೇಕಾದ ಬಗೆಯನ್ನು ಕುರಿತು ಮೂಲಭೂತವಾದ ಮಾನದಂಡವನ್ನು ರೂಪಿಸುವಲ್ಲಿ ವಿಶ್ವಸಂಸ್ಥೆ ಮುಂದಾಗುವಂತೆ ಈ ರಾಷ್ಟ್ರಗಳು ಬಯಸಿದುವು. ಇದು ರಾಷ್ಟ್ರಗಳ ಒಕ್ಕೂಟಕ್ಕಿಂತ (ಲೀಗ್ ಆಫ್ ನೇಷನ್ಸ್) ವಿಭಿನ್ನವಾಗಿ ಕಂಡು ಬಂದಿರುವ ಗಮನಾರ್ಹ ಪ್ರಗತಿ.

ವಿಶ್ವಸಂಸ್ಥೆಯ ಪ್ರಣಾಳಿಕೆ (ಯುಎನ್ ಚಾರ್ಟರ್) ಅಂತಾರಾಷ್ಟ್ರೀಯ ಕಾನೂನಿನಲ್ಲಿ ಹೊಸ ಆಯಾಮವೊಂದನ್ನು ತೆರೆದಿದೆ. ಇದಕ್ಕೆ ಮೊದಲು ಅಂತಾರಾಷ್ಟ್ರೀಯ ಕಾನೂನುಗಳು ಸರ್ಕಾರಗಳ ನಡುವೆ ಮಾತ್ರ ನಿಯಂತ್ರಿಸಲ್ಪಡಲು ಸೀಮಿತವಾಗಿದ್ದುವೇ ವಿನಾ ಸರ್ಕಾರ ಹಾಗೂ ನಾಗರಿಕರ ನಡುವೆ ಅವುಗಳ ವ್ಯಾಪ್ತಿ ಇರಲಿಲ್ಲ.

ವಿಶ್ವಸಂಸ್ಥೆಯ 13ನೆಯ ಕಟ್ಟಳೆಯಲ್ಲಿರುವಂತೆ ಮಾನವ ಹಕ್ಕುಗಳ ಘೋಷಣೆ ತರ್ಕಬದ್ಧವೂ ಸಭೆಯ ನೇರವಾದ ಆದೇಶವೂ ಆಗಿದೆ. `ಅಧ್ಯಯನ ಕೈಗೊಳ್ಳುವಿಕೆ ಹಾಗೂ ಸಲಹೆಮಾಡುವಿಕೆ ಮಾನವ ಹಕ್ಕುಗಳ ಹಾಗೂ ಜನಾಂಗ, ಲಿಂಗ, ಭಾಷೆ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮೂಲಭೂತ ಸ್ವಾತಂತ್ರ್ಯ ಇವು ಕಾರ್ಯರೂಪಕ್ಕೆ ಬರಲು ನೆರವಾಗುವಿಕೆ.
ವಿಶ್ವಸಂಸ್ಥೆಯ 55 ಹಾಗೂ 56 ನೆಯ ನಿಯಮಾವಳಿ ಮಾನವ ಹಕ್ಕುಗಳ ಹಾಗೂ ಮೂಲಭೂತ ತತ್ತ್ವಗಳ ಅನುಷ್ಠಾನಕ್ಕಾಗಿ ಸದಸ್ಯರು ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಕಾರ್ಯೋನ್ಮುಖರಾಗಲು ಕರೆಕೊಟ್ಟಿದೆ.

ಇದರ ಪರಿಶೋಧನೆಯ ಕಾರ್ಯವನ್ನು ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆಗೆ (ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್) ವಹಿಸಿದೆ. ಮಾನವ ಹಕ್ಕುಗಳ ಆಯೋಗ ಇದರ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಾನವ ಹಕ್ಕುಗಳ ಸಮಿತಿಯ ಕಾರ್ಯಚಟುವಟಿಕೆಯ ಬಗೆಗೆ ಕೆಲವು ನಿದರ್ಶನ ನೀಡಬಹುದು.
1983ರಲ್ಲಿ ಕಾಂಪೂಚಿಯಾದಲ್ಲಿ ನಡೆದ ನಿರಂತರವಾದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಮಿತಿ ಖಂಡಿಸಿತು. ಆಫ್ಘನ್ ಪ್ರಜೆಗಳ ಹಕ್ಕುಗಳನ್ನು ಎತ್ತಿ ಹಿಡಿಯಿತು. ಅವರು `ಹೊರಗಡೆಯವರ ಮಧ್ಯಪ್ರವೇಶವಿಲ್ಲದ, ಬುಡಮೇಲು ಕೃತ್ಯಗಳಿಂದ ಮುಕ್ತವಾದ, ನಿರ್ಬಂಧಕ್ಕೊಳಪಡದ, ತಮ್ಮ ಬಯಕೆಗೆ ಅನುಗುಣವಾದ ಸರ್ಕಾರವನ್ನು ನಿರ್ಧರಿಸಲು ಬೆಂಬಲಿಸಿತು.' ಪೋಲೆಂಡಿನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡ ಮಾನವ ಹಕ್ಕು ಹಾಗೂ ಮೂಲಭೂತ ಸ್ವಾತಂತ್ರ್ಯಗಳ ಉಲ್ಲಂಘನೆಯನ್ನು ಕುರಿತು ಮಾನವ ಹಕ್ಕುಗಳ ಸಮಿತಿ ತನ್ನ ತೀವ್ರ ಕಳವಳ ವ್ಯಕ್ತಪಡಿಸುವಂತೆಯೇ ಇರಾನಿನಲ್ಲಿ ಮಾನವ ಹಕ್ಕುಗಳ ಹಾಗೂ ಮೂಲಭೂತ ಸ್ವಾತಂತ್ರ್ಯಗಳ ತೀವ್ರ ಉಲ್ಲಂಘನೆ `ಮನಸ್ವಿಯಾಗಿ ಮರಣದಂಡನೆಗೆ ಗುರಿಪಡಿಸುವಿಕೆ, ಚಿತ್ರಹಿಂಸೆ, ವಿಚಾರಣೆಯಿಲ್ಲದೆ ಬಂಧನ ಬಗ್ಗೆಯೂ ಮಾನವ ಹಕ್ಕುಗಳ ಸಮಿತಿ ತನ್ನ ತೀವ್ರ ಆತಂಕವನ್ನು ವ್ಯಕ್ತಪಡಿಸಿತು. ದಕ್ಷಿಣ ಆಫ್ರಿಕ ಸರ್ಕಾರದ ಹೇಯನೀತಿ ಹಾಗೂ ಚಿಲಿಯ ಮಿಲಿಟರಿ ಸರ್ಕಾರದಿಂದ ಮಾನವ ಹಕ್ಕುಗಳ ಸತತ ಉಲ್ಲಂಘನೆ ಈ ಬಗ್ಗೆಯೂ ಮಾನವ ಹಕ್ಕುಗಳ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ.

ಯಾವುದೇ ದೇಶದಲ್ಲಿ ಗೌರವಯುತವಾದ ಬಾಳುವೆ ನಡೆಸಲು ಬದುಕುವ ಹಕ್ಕು, ಸ್ವಾತಂತ್ರ್ಯ ಹಾಗೂ ಆಸ್ತಿಯ ಹಕ್ಕು ಇವುಗಳ ಭದ್ರತೆ ಅಗತ್ಯ. ಈ ಮಾನವ ಹಕ್ಕುಗಳು ಇಂಗ್ಲೆಂಡ್, ಅಮೆರಿಕ ಹಾಗೂ ಭಾರತದಲ್ಲಿ ಜನರಿಗೆ ಹೇಗೆ ಭದ್ರತೆ ಒದಗಿಸಿವೆ ಎಂದು ಪರಿಶೀಲಿಸಬಹುದು.

ಬ್ರಿಟಿಷ್ ಸಂವಿಧಾನ ಅಲಿಖಿತವಾದುದು. ಅಲ್ಲಿ ಮೂಲಭೂತ ಹಕ್ಕುಗಳ ಯಾವ ವಿಧಿಯೂ ಇರುವುದಿಲ್ಲ. ಅಂದಮಾತ್ರಕ್ಕೆ ಮೂಲಭೂತ ಹಕ್ಕುಗಳು ಅಂಗೀಕರಿಸಲ್ಪಟ್ಟಿಲ್ಲವೆಂದು ಅರ್ಥವಲ್ಲ. ವ್ಯಕ್ತಿಯ ಮೂಲಭೂತ ಹಕ್ಕುಗಳಿರದ ಪ್ರಜಾಪ್ರಭುತ್ವ ಅರ್ಥಹೀನವೇ ಸರಿ. ಈ ಧ್ಯೇಯೋದ್ದೇಶ ಅಲ್ಲಿ ವಿಭಿನ್ನ ರೀತಿಯಲ್ಲಿ ಸುಭದ್ರವಾಗಿದೆ. ಇಂಗ್ಲೆಂಡಿನಲ್ಲಿ ವ್ಯಕ್ತಿಯ ಹಕ್ಕುಗಳು ನಿಷೇಧಾರ್ಥಕವಾದವು. ಅಂದರೆ ಎಲ್ಲಿಯತನಕ ಒಬ್ಬ ವ್ಯಕ್ತಿ ರಾಷ್ಟ್ರದ ಸಾಮಾನ್ಯ ಕಾನೂನನ್ನು ಉಲ್ಲಂಘಿಸುವುದಿಲ್ಲವೋ ಅಲ್ಲಿಯ ತನಕ ಆತನ ಹಕ್ಕು ಹಾಗೂ ಸ್ವಾತಂತ್ರ್ಯಕ್ಕೆ ಏನೊಂದು ಅಡ್ಡಿಯೂ ಇರುವುದಿಲ್ಲ. ಆಯಾ ವ್ಯಾಜ್ಯಗಳನ್ನು ಅನುಸರಿಸಿ ಅಲ್ಲಿಯ ನ್ಯಾಯಾಲಯಗಳು ನೀಡಿರುವ ತೀರ್ಪುಗಳಲ್ಲಿ ವ್ಯಕ್ತಿಗತ ಹಕ್ಕುಗಳನ್ನು ದೃಢಪಡಿಸಲಾಗಿದೆ. ಆದ್ದರಿಂದ ಇಂಗ್ಲೆಂಡಿನಲ್ಲಿ ಪ್ರಜೆಗಳು ಅನುಭವಿಸುವ ಮಾನವ ಹಕ್ಕುಗಳು ಬೇರೆ ಯಾವುದೇ ದೇಶಗಳಲ್ಲಿಯ ಹಕ್ಕುಗಳಿಗಿಂತ ಕಡಮೆಯಾದದ್ದಲ್ಲ.

ಬೇರೆಡೆಗಳಂತೆ ಇಂಗ್ಲೆಂಡಿನಲ್ಲಿಯೂ ನ್ಯಾಯಾಂಗ ವ್ಯಕ್ತಿಹಕ್ಕುಗಳ ಪಾಲಕಸ್ಥಾನದಲ್ಲಿದ್ದರೂ ಅಲ್ಲಿ ವ್ಯತ್ಯಾಸವಿದೆ. ಪ್ರಜೆಗಳನ್ನು ಪ್ರಭುತ್ವದ ನಿರಂಕುಶಾಧಿಕಾರದಿಂದ ರಕ್ಷಿಸಲು ನ್ಯಾಯಾಂಗ ಪೂರ್ಣ ಅಧಿಕಾರ ಹೊಂದಿದೆ. ಆದರೆ ಶಾಸನ ಸಭೆಯ ಪರಮಾಧಿಕಾರದ ದೆಸೆಯಿಂದ, ವ್ಯಕ್ತಿಹಕ್ಕುಗಳ ವಿರುದ್ಧವಾದ ಶಾಸನಾತ್ಮಕ ದಬ್ಬಾಳಿಕೆಯನ್ನು ನಿವಾರಿಸಲು ನ್ಯಾಯಾಲಯಗಳು ಅಧಿಕಾರರಹಿತವಾಗಿವೆ. ಸಾರ್ವಜನಿಕ ಅಭಿಪ್ರಾಯಗಳು ಮಾತ್ರವೇ ಶಾಸನ ಸಭೆಯನ್ನು ನಿಯಂತ್ರಿಸಿ ಮಾರ್ಗದರ್ಶನ ನೀಡಬಹುದಾಗಿದೆ.

ಅಮೆರಿಕಾ ಸಂವಿಧಾನದ ಮೊದಲ ಹತ್ತು ತಿದ್ದುಪಡಿಗಳು ಅಮೆರಿಕನರ ಹಕ್ಕುಗಳ ವಿವರಣೆಯನ್ನು ಒಳಗೊಂಡಿವೆ. ಅವು ಶಾಸನಸಭೆ ಹಾಗೂ ಕಾರ್ಯಾಂಗ ಎರಡನ್ನೂ ಇದಕ್ಕೆ ಬದ್ಧಗೊಳಿಸುತ್ತವೆ. ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆ ಕಂಡುಬಂದರೆ, ಕಾಂಗ್ರೆಸ್ ಮಾಡಿದ ಯಾವುದೇ ಕಾಯಿದೆಯನ್ನು ಸಂವಿಧಾನ ವಿರೋಧಿಯೆಂದು ಘೋಷಿಸಿ ಅನೂರ್ಜಿತಗೊಳಿಸುವ ಅಧಿಕಾರವನ್ನು ಅಲ್ಲಿಯ ನ್ಯಾಯಾಲಯಗಳು ಪಡೆದಿವೆ. ಅಷ್ಟೇ ಅಲ್ಲದೆ ಸಾಮಾನ್ಯ ನಿಯಮಗಳಿಗೆ ವಿರುದ್ಧವಾದ ಆಧಾರದ ಮೇಲೆ `ಡ್ಯೂ ಪ್ರಾಸೆಸ್ (ಸರಿಯಾದ ಪ್ರಕ್ರಿಯೆ) ಎಂದು ಹೇಳಲ್ಪಡುವಂತೆ ಅಂಥ ನಿಯಮಗಳನ್ನು ನ್ಯಾಯಾಲಯಗಳು ತಿರಸ್ಕರಿಸುತ್ತವೆ. ಡ್ಯೂ ಪ್ರಾಸೆಸ್‍ನಲ್ಲಿ ಅಡಕವಾಗುವ ಅಂಶಗಳ ಬಗ್ಗೆ ಸಂವಿಧಾನದಲ್ಲಿ ವಿಶದಗೊಳಿಸಿಲ್ಲ. ಸರ್ವೋಚ್ಚ ನ್ಯಾಯಾಲಯ ಮಾತ್ರವೇ ಅದಕ್ಕೆ ವಿವರಣೆ ನೀಡಬಹುದಾಗಿದೆ. 

ಡ್ಯೂ ಪ್ರಾಸೆಸ್ ಕಾಲಮನ್ನು ವ್ಯಾಖ್ಯಾನಿಸುವಾಗ, ಅಮೆರಿಕನ್ ನ್ಯಾಯಾಧೀಶರು ಜಾರಿಯಲ್ಲಿರುವ ಕಾನೂನುಗಳ ಜೊತೆಗೆ ಮಾನವನಿಗೆ ಅತ್ಯವಶ್ಯವಾದ ಕೆಲವೊಂದು ಸ್ವಾಭಾವಿಕ ಹಕ್ಕುಗಳ ಬಗೆಗೂ ಚರ್ಚಿಸುತ್ತಾರೆ. ರಾಷ್ಟ್ರ ಮಾಡಿರುವ ಕಾನೂನು ವ್ಯಕ್ತಿಯ ಮೂಲಭೂತವಾದ ಸ್ವಾಭಾವಿಕ ಹಕ್ಕುಗಳಿಗೆ ಅನ್ವಯವಾಗುವಂತಿದೆಯೇ ಎಂಬುದನ್ನು ನ್ಯಾಯಾಲಯಗಳು ಪರೀಕ್ಷಿಸುತ್ತವೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಅಮೆರಿಕದಲ್ಲಿರುವ ನ್ಯಾಯಾಂಗದ ಪರಮಾಧಿಕಾರದಂತೆ ನ್ಯಾಯಾಲಯಗಳು ಕಾನೂನುಗಳ ಸಮಂಜಸತೆಯನ್ನು (ರೀಸನ್‍ಬಲ್‍ನೆಸ್) ಪರೀಕ್ಷಿಸುತ್ತವೆ.

ಭಾರತ ಸಂವಿಧಾನದ ಮೂರನೆಯ ಅಧ್ಯಾಯದಲ್ಲಿ ಭಾರತೀಯರಿಗೆ ಮೂಲಭೂತ ಹಕ್ಕುಗಳ ಭರವಸೆ ನೀಡಲಾಗಿದೆ. ಆದರೆ ಎಲ್ಲರಿಗೂ ಉದ್ಯೋಗ ಸಂವಿಧಾನದತ್ತ ಹಕ್ಕಾಗದಿರುವುದು ಒಂದು ಕೊರತೆ. ಸಮುದಾಯದ ಹಿತದೃಷ್ಟಿಯಿಂದ ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಧಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ. 

ಮೂಲ ಸಂವಿಧಾನದ ಮೂರನೆಯ ಅಧ್ಯಾಯದಲ್ಲಿ ಹಕ್ಕುಗಳ ಪರಿಧಿಯನ್ನು 32 ವರ್ಷಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಸ್ವಲ್ಪ ಸ್ವಲ್ಪವಾಗಿ, ಅನೇಕ ತಿದ್ದುಪಡಿಗಳ ಮೂಲಕ ಪರಿಮಿತಿಗೊಳಿಸಲಾಗಿದೆ. ಅಂತೆಯೇ 1978ರಲ್ಲಿ ಜನತಾ ಸರ್ಕಾರ ರಾಜ್ಯಾಂಗದ 44ನೆಯ ತಿದ್ದುಪಡಿಯನ್ನು ಅಂಗೀಕರಿಸಿ ಸಂವಿಧಾನದಲ್ಲಿಯ ಮೂಲಭೂತ ಹಕ್ಕುಗಳಲ್ಲಿ ಆಸ್ತಿಯ ಹಕ್ಕುಗಳನ್ನು ಕೈಬಿಟ್ಟಿತು.

1976ರ ರಾಜ್ಯಾಂಗದ 42ನೆಯ ತಿದ್ದುಪಡಿಯ ಮೂಲಕ , ವಿಧಿ 51(ಂ)ಯಲ್ಲಿ ಮೂಲಭೂತ ಕರ್ತವ್ಯಗಳನ್ನು ಉಲ್ಲೇಖಿಸಲಾಯಿತು. ಈ ಕರ್ತವ್ಯಗಳನ್ನು ತಮ್ಮಷ್ಟಕ್ಕೆ ನ್ಯಾಯಾಲಯದಲ್ಲಿ ಜಾರಿಗೊಳಿಸುವುದು ಸಾಧ್ಯವಾಗದಿದ್ದರೂ ಅವುಗಳ ಉಲ್ಲಂಘನೆ ಶಿಕ್ಷಾರ್ಹವೇನೂ ಆಗಿರುವುದಿಲ್ಲ. ಆದರೆ ಮೂಲಭೂತ ಕರ್ತವ್ಯಗಳನ್ನು ಉಲ್ಲಂಘಿಸಿದ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ನಿರಾಕರಿಸಬಹುದಾಗಿದೆ. ಮೂಲಭೂತ ಹಕ್ಕುಗಳ ಬಗ್ಗೆ ಮೂಲಸಂವಿಧಾನದಲ್ಲಿ ಒತ್ತು ನೀಡಿರುವ ಅಂಶಗಳನ್ನು ಇದೀಗ ಕನಿಷ್ಠ ಪ್ರಮಾಣಕ್ಕೆ ಇಳಿಸಲಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯ ಎ.ಕೆ ಗೋಪಾಲನ್ ವಿರುದ್ಧ ಮದರಾಸ್ ಸರ್ಕಾರದ ವ್ಯಾಜ್ಯದಲ್ಲಿ ಡ್ಯೂ ಪ್ರಾಸೆಸ್ ಸಿದ್ಧಾಂತವನ್ನು ತಿರಸ್ಕರಿಸಿದೆ. ಅದರ ಬದಲಿಗೆ ಕಾನೂನಿನಿಂದ ಸ್ಥಿರಪಡಿಸಲಾಗಿರುವ ನಿಯಮಾವಳಿಗಳನ್ನು (ಪ್ರೊಸೀಜರ್ ಎಸ್ಟಾಬ್ಲಿಷ್ಡ್ ಬೈಲಾ) ಸಮರ್ಥಿಸಲಾಗಿದೆ. `ಕಾನೂನು ಎಂದರೆ ಜಾರಿಯಲ್ಲಿರುವಂಥದು ಅಥವಾ ಸರ್ಕಾರ ಮಾಡಿದ ಕಾನೂನು. ಕೇವಲ ಭಾವನಾತ್ಮಕ ಅಥವಾ ಸಾಮನ್ಯ ಅಭಿಪ್ರಾಯಕ್ಕೆ ಸಮಾನಾರ್ಥಕವಾದುದಲ್ಲ. ಆದ್ದರಿಂದ ನ್ಯಾಯಾಲಯ ಈ ಬಗೆಯ ಕಾನೂನುಗಳ ಸಮಂಜಸತೆಯನ್ನು ಪರೀಕ್ಷಿಸುವುದಿಲ್ಲ.' ಲಿಖಿತ ಕಾನೂನನ್ನು ಹೊರತುಪಡಿಸಿ ಉಳಿದಂತೆ ಸರ್ವೋಚ್ಚ ನ್ಯಾಯಾಲಯ ಕಾನೂನಿನ ಸಮಂಜಸತೆಯನ್ನು ವಿಚಾರಣೆ ಮಾಡುವುದಿಲ್ಲ.

ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯದ ದೇಶದ ಸಾಮಾಜಿಕಾರ್ಥಿಕ ಸ್ಥಿತಿಗಳ ಹಿನ್ನೆಲೆ ಪರಿಗಣಿಸುತ್ತ ನಾಗರಿಕ ಹಕ್ಕುಗಳನ್ನು ಸ್ಥಾಪಿಸುವುದರ ಬಗ್ಗೆ ಕ್ರಿಯಾಶೀಲವಾಗಿದೆ (ಜುಡಿಶಿಯಲ್ ಆ್ಯಕ್ಟಿವಿಸಮ್). ಅನಾಸಕ್ತಿಯ ಜಾಗದಲ್ಲಿ ನ್ಯಾಯಾಂಗವನ್ನು ಚುರುಕುಗೊಳಿಸುವ ಧೋರಣೆ ರೂಪಿತವಾಗಿದೆ. ಆಗ್ರಾ ರಕ್ಷಣಾಗೃಹದ ವ್ಯವಹಾರಗಳು, ಬಿಹಾರದ ವಿಚಾರಣಾಧೀನ ಕೈದಿಗಳ ಪ್ರಕರಣ ಭಾಗಲ್ಪುರದ ಅಂಧತ್ವದ ಪ್ರಕರಣ, ಜೀತದಾಳುಗಳ ದುಸ್ಥಿತಿ, ಜಮೀನಿಲ್ಲದ ಕೃಷಿ ಕಾರ್ಮಿಕರ ಅವಸ್ಥೆ ಇವೇ ಮೊದಲಾದ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳಲ್ಲಿ ನ್ಯಾಯಾಲಯಗಳು ವಿಚಾರಣೆ ನಡೆಸಿವೆ. ಕೊಡೈಕೆನಾಲ್ ಬೆಟ್ಟದಲ್ಲಿ ಜಾಲಿಯ ಮರದ ತೊಗಟೆ ಸುಲಿಯುವ ಕಾರ್ಮಿಕರ ಅಮಾನವೀಯ ಶೋಷಣೆ ಬಗೆಗೆ ವಿಚಾರಣೆ ನಡೆಸುತ್ತ ಸರ್ವೋಚ್ಚ ನ್ಯಾಯಾಲಯ ತಮಿಳುನಾಡು ಸರ್ಕಾರಕ್ಕೆ ಯುಕ್ತ ನಿರ್ದೇಶನ ನೀಡಿತು: ತೋಟಗಳ ಕಾರ್ಮಿಕರಿಗೆ ಉದ್ಯೋಗ ಮತ್ತು ವಸತಿ ಸೌಲಭ್ಯ ಕಲ್ಪಿಸುವ ಮತ್ತು ಅವರ ಸ್ಥಿತಿಗತಿ ಸುಧಾರಿಸುವ ಯೋಜನೆಯೊಂದನ್ನು ರೂಪಿಸಿ ರಾಷ್ಟ್ರೀಯ ವ್ಯವಸಾಯ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಕಳಿಸಿಕೊಡಬೇಕೆಂಬುದೇ ಆ ನಿರ್ದೇಶನ. ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯೊಂದರಲ್ಲಿ ಈ ನಿರ್ದೇಶನ ನೀಡಲಾಯಿತೆಂಬುದನ್ನು ಗಮನಿಸಬೇಕು. ಮಾನವ ಹಕ್ಕುಗಳ ದೃಢೀಕರಣಕ್ಕಾಗಿ ಕೈಗೊಳ್ಳಲಾಗಿರುವ ಮಹತ್ತ್ವದ ಹೆಜ್ಜೆಗಳಿವು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾನೂನು ನೆರವು ಸಮಿತಿ ಸದಾ ಕಾರ್ಯತತ್ಪರವಾಗಿದೆ. ತಮ್ಮ ಹಕ್ಕುಗಳ ಸಂರಕ್ಷಣೆಗಾಗಿ ಅರ್ಹರಾದ ಬಡವರಿಗೂ ದಾರಿದ್ರ್ಯ ಸ್ಥಿತಿಯಲ್ಲಿರುವವರಿಗೂ ನೆರವಾಗುವುದೇ ಇದರ ಉದ್ದೇಶ. ಇಂಗ್ಲೆಂಡಿನಲ್ಲಿರುವ ಮಾದರಿಯಂತೆ ರಾಷ್ಟ್ರೀಯ ಕಾನೂನು ಸೇವಾ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

ಮಾನವ ಹಕ್ಕುಗಳ ನೆರವಿಗೆ ಬಂದಿರುವ ತನಿಖಾ ಪ್ರಧಾನವಾದ ಪತ್ರಿಕೋದ್ಯಮ (ಇನ್‍ವೆಸ್ಟಿಗೇಟಿವ್ ಜರ್ನಲಿಸಮ್) ಈ ದೆಸೆಯಲ್ಲಿ ಮತ್ತಷ್ಟು ಪ್ರೇರಣೆ ನೀಡಿದೆ ನಿರಂತರವಾದುದು. ಇದು ವಿವಿಧ ಮುಖಗಳಲ್ಲಿ ನಡೆಸಬೇಕಾದ ಹೋರಾಟ ಎಲ್ಲಕ್ಕಿಂತ ಮಿಗಿಲಾಗಿ, ಮಾನವ ವ್ಯಕ್ತಿತ್ವದ ಪೂರ್ಣವಿಕಾಸ ಮತ್ತು ಮಾನವ ಹಕ್ಕುಗಳ ಬಲವರ್ಧನೆ ಹಾಗೂ ಮೂಲಭೂತ ಸ್ವಾತಂತ್ರ್ಯ ಸಂರಕ್ಷಣೆ ಇವು ಶಿಕ್ಷಣದಿಂದ ಮಾರ್ಗದರ್ಶನ ಪಡೆಯಬೇಕಾಗಿದೆ. ಶಿಕ್ಷಣವೊಂದೇ ಎಲ್ಲ ರಾಷ್ಟ್ರಗಳ ನಡುವೆ ಪರಸ್ಪರ ಅರಿವು, ಸಹಿಷ್ಣುತೆ ಹಾಗೂ ಸ್ನೇಹವನ್ನು ಸಂವರ್ಧನೆಗೊಳಿಸಬಲ್ಲುದು.	
			(ಆರ್.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ